ಸಲಾರ್ ಖಾನ್ಸಾರ್ ಕುರ್ಚಿಗಾಗಿ ಯುದ್ದ - ರೇಟಿಂಗ್ : 4/5 ****
Posted date: 23 Sat, Dec 2023 11:33:08 AM
ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ  ದೊರೆತಿದೆ. ನೂರಾರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಸಲಾರ್ ತೆಲುಗು ಚಿತ್ರವಾದರೂ, ಬಹುತೇಕ ಕನ್ನಡಿಗರೇ ಸೇರಿ ನಿರ್ಮಿಸಿದ  ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಟ್ರೈಲರ್ ನಲ್ಲಿ   ಚಿತ್ರದ  ಕಂಟೆಂಟ್ ಬಗ್ಗೆ ಒಂದಷ್ಟು ಸುಳಿವು ನೀಡಿದ್ದ ‌ ಚಿತ್ರತಂಡ ಈಗ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ. ಸಲಾರ್  ಚಿತ್ರಕ್ಕೆ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ. ಪ್ರಭಾಸ್, ಪೃಥ್ವೀರಾಜ್ ಸುಕುಮಾರನ್ ಹಾಗೂ ಶೃತಿ ಹಾಸನ್ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಖಾನ್ಸಾರ್ ಎಂಬ ಕಾಲ್ಪನಿಕ ಸಾಮ್ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು  ನಡೆಯುವ  ಘರ್ಷಣೆಯ ಕಥೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. 
 
ಖಾನ್ಸಾರ್ ರಾಜ್ಯದಲ್ಲಿ ದೇವರಥ(ಪ್ರಭಾಸ್) ಹಾಗೂ ವರದರಾಜ ಮನ್ನಾರ್(ಪೃಥ್ವಿರಾಜ್ ಸುಕುಮಾರನ್) ಚಿಕ್ಕ ವಯಸಿನಿಂದಲೂ  ಕುಚಿಕು ಗೆಳೆಯರು.  ವರದನಿಗೆ ಯಾರೇ ತೊಂದರೆ ಕೊಟ್ಟರೂ ಅವರನ್ನು ಗರ್ವ ಅಡಗಿಸುತ್ತಿದ್ದ
ದೇವ, ಗೆಳೆಯನಿಗಾಗಿ ಪ್ರಾಣವನ್ನೇ ಕೊಡಲೂ ವರದ ಸಿದ್ದ, ಇಂಥ ಜೀವದ ಗೆಳೆಯರು ಅಗಲುವ ಸಂದರ್ಭ ಬಂದೇ ಬಿಡುತ್ತದೆ, ತನ್ನ ತಾಯಿಯ ಜೊತೆ ದೇವ ಖಾನ್ಸಾರ್ ಬಿಟ್ಟು ಹೋಗಬೇಕಾಗುತ್ತದೆ, ಅಲ್ಲಿಂದ ಹೊರಟ ತಾಯಿ ಮಗ ದೂರದ ಅಸ್ಸಾಂನಲ್ಲಿ ನೆಲೆಸುತ್ತಾರೆ, ಅಲ್ಲಿ   ದೇವ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿರುತ್ತಾನೆ.  ಮುಂದೆಂದೂ ತಾನು ಆಯುಧ ಹಿಡಿಯುವುದಿಲ್ಲ ಎಂದು  ತಾಯಿಗೆ ಭಾಷೆ ಕೊಟ್ಟಿರುತ್ತಾನೆ. ಕೊಟ್ಟ ಮಾತಿನಂತೆ ದೇವ ಆಕೆ ಹೇಳುವವರೆಗೂ ಆಯುಧ ಮುಟ್ಟುವುದಿಲ್ಲ. ತನ್ನೆದುರು ತಪ್ಪು ನಡೆದಾಗಲೂ  ಏನೂ ಮಾಡಲಾಗದೆ ಒಳಗೊಳಗೇ ಕುದಿಯುತ್ತಿರುತ್ತಾನೆ. ಹೀಗಿರುವಾಗ ಒಮ್ಮೆ ಆದ್ಯ(ಶೃತಿಹಾಸನ್) ಎಂಬ ಯುವತಿ ವಿದೇಶದಿಂದ ಕೊಲ್ಕತ್ತಾಗೆ ಬರುತ್ತಾಳೆ. ಆದ್ಯಳ ಜೀವಕ್ಕೆ ಅಪಾಯವಿದೆ ಎಂದರಿತ ಆಕೆಯ ತಂದೆ ತನ್ನ ಸಹಾಯಕನ ಮೂಲಕ ಅಸ್ಸಾಂನಲ್ಲಿರುವ ದೇವನ ತಾಯಿಯ ಬಳಿ ಟೀಚರ್ ಕೆಲಸಕ್ಕೆ ಕಳುಹಿಸುತ್ತಾನೆ. ಆದ್ಯಳ ಇರುವಿಕೆ ಹೇಗೋ ಆಕೆಯ ತಂದೆಯನ್ನು ವಿರೋಧಿಗಳಿಗೆ ಗೊತ್ತಾಗುತ್ತದೆ, ಆದ್ಯಳನ್ನು ಅಪಹರಿಸುವ  ಸಮಯದಲ್ಲಿ ದೇವನಿಗೆ ಆತನ ತಾಯಿಯೇ ಹೋಗು ಆದ್ಯಳನ್ನು ರಕ್ಷಿಸು ಎಂದು ಆಜ್ಞಾಪಿಸುತ್ತಾಳೆ ಇದನ್ನೇ ಕಾಯುತ್ತಿದ್ದ ದೇವ ದುಷ್ಕರ್ಮಿಗಳನ್ನು ಅಟ್ಟಾಡಿಸಿ ಹೊಡೆದು ಹಾಕುತ್ತಾನೆ. 
 
25 ವರ್ಷಗಳ ನಂತರ ವರದನ ರಕ್ಷಣೆಗಾಗಿ  ದೇವ 
ತನ್ನ ತಾಯ್ನಾಡಿಗೆ ಮರಳಬೇಕಾಗುತ್ತದೆ, ಅಲ್ಲಿ ಖಾನ್ಸಾರ್ ಸಾಮ್ರಾಜ್ಯದ ಗದ್ದುಗೆಗಾಗಿ ಪೈಪೋಟಿ ಜೋರಾಗಿರುತ್ತದೆ, ಆ ಸಮಯದಲ್ಲೇ ದೇವ ಖಾನ್ಸಾರ್‌ಗೆ ಎಂಟ್ರಿ ಕೊಡುತ್ತಾನೆ. ಮುಂದೆ ನಡೆಯುವ ಕಥೆಯೇ ರಣರೋಚಕ.  ಇಷ್ಟಕ್ಕೂ ಆದ್ಯ ಯಾರು? ಆಕೆಯ ತಂದೆ ಮೇಲೆ ಯಾರಿಗೆ ದ್ವೇಷವಿರುತ್ತದೆ, ಖಾನ್ಸಾರ್ ದೊರೆಯ ಪಟ್ಟದ ಮೇಲೆ ವರದ ಅಥವಾ ದೇವನಿಗೂ ಹಕ್ಕಿದೆಯಾ, ಅಷ್ಟಕ್ಕೂ  ಕಥೆಯ ಕೇಂದ್ರಬಿಂದು ಖಾನ್ಸಾರ್‌ನ ಹಿನ್ನೆಲೆ ಏನು? ಈ ಎಲ್ಲ ಪ್ರಶ್ನೆಗಳಿಗೆ ಸಲಾರ್ ಸೀಸ್ ಫೈರ್  ಉತ್ತರ ನೀಡುತ್ತದೆ, 
ಇಡೀ ಚಿತ್ರದಲ್ಲಿ ಪ್ರಶಾಂತ್ ನೀಲ್ ಅವರ ಹಿಂದಿನ ಉಗ್ರಂ ಚಿತ್ರದ ನೆರಳಿರುವುದು  ಎದ್ದು ಕಾಣುತ್ತದೆ,  ಅದನ್ನು ಪ್ರಶಾಂತ್ ಕೂಡ ಒಪ್ಪಿಕೊಂಡಿದ್ದಾರೆ, ಗುಜರಾತ್, ಪಾಕಿಸ್ತಾನದ ನಡುವೆ ಖಾನ್ಸಾರ್ ಎಂಬ ಪ್ರದೇಶದಲ್ಲಿ ರಾಜಮನ್ನಾರ್ ಆಳ್ವಿಕೆ ನಡೆಸುತ್ತಾನೆ. ಆ ಪ್ರದೇಶದಲ್ಲಿ ೩ ಬೇರೆ ಬೇರೆ ಸಮುದಾಯದ ಜನರಿದ್ದು, ಅವರ ನಡುವೆಯೇ  ರಾಜನ ಕುರ್ಚಿಗಾಗಿ ಆಗಾಗ ಆಂತರ್ಯುದ್ಧಗಳು, ತಂತ್ರ, ಕುತಂತ್ರಗಳು ಆಗಾಗ ನಡೆಯುತ್ತಲೇ ಇರುತ್ತದೆ. 
 
ಚಿತ್ರದ ಕತೆ ಕೊಲ್ಕತ್ತಾ, ಹೈದರಾಬಾದ್, ಗುಜರಾತ್, ಬರ್ಮಾಗಡಿ ಹೀಗೆ ಎಲ್ಲಾಕಡೆ  ಸುತ್ತಾಡಿಸುತ್ತದೆ. ಚಿತ್ರದುದ್ದಕ್ಕೂ ಕಾಣುವ ಡಾರ್ಕ್ ಶೇಡ್, ಸಿನಿಮಾಟೋಗ್ರಫಿ, ಪಾತ್ರಗಳ ಆರ್ಭಟ, ರವಿಬಸ್ರೂರು ಅವರ  ಹಿನ್ನೆಲೆ ಸಂಗೀತ ಎಲ್ಲವೂ ಪ್ರಶಾಂತ್ ನೀಲ್ ಅವರ ಹಿಂದಿನ ಸಿನಿಮಾಗಳನ್ನೇ ಕಣ್ಮುಂದೆ ತರುತ್ತವೆ. ಆಕ್ಷನ್ ಸನ್ನಿವೇಶಗಳಲ್ಲಿ ಪ್ರಭಾಸ್ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಕೊನೆಯ ಭಾಗದಲ್ಲಿ ಕಾಟೇರಮ್ಮನ ಎದುರೇ ನಡೆಯುವ ಕಾದಾಟ ಮಾಸ್ ಪ್ರೇಕ್ಷಕರಿಗೆ  ಸಖತ್ ಕಿಕ್ ನೀಡುತ್ತವೆ, ಇಲ್ಲಿ ಪ್ರಭಾಸ್, ಪೃಥ್ವಿ ಇಬ್ಬರೂ ಮದಗಜಗಳಂತೆ  ಹೂಂಕರಿಸಿದ್ದಾರೆ. ಚಿತ್ರದ ಮೊದಲಾರ್ಧ  ನಿಧಾನವಾಗಿ ಸಾಗುವ ಕಥೆ, ದ್ವಿತಿಯಾರ್ಧದಲ್ಲಿ  ಒಂದಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದೆ, ಸಲಾರ್ ಚಿತ್ರ ೨ ಭಾಗದಲ್ಲಿ  ಮೂಡಿಬಂದಿದ್ದು, ಪಾರ್ಟ್-೧ರಲ್ಲಿ ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿರುವ ನಿರ್ದೇಶಕರು, ೨ನೇ ಪಾರ್ಟ್ ನಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. 
 
ನಾಯಕಿ ಶೃತಿಹಾಸನ್ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ. ಇನ್ನುಳಿದಂತೆ ಜಗಪತಿಬಾಬು, ಈಶ್ವರಿರಾವ್, ಅಲ್ಲದೆ ಕನ್ನಡಿಗರಾದ ಮಧು ಗುರುಸ್ವಾಮಿ, ಗರುಡರಾಮ್, ದೇವರಾಜ್, ನವೀನ್ ಶಂಕರ್ ,ಪ್ರಮೋದ್ ಎಲ್ಲರೂ ಸಿಕ್ಕ  ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ತಾಂತ್ರಿಕವಾಗಿ ಸಲಾರ್ ನಿಜಕ್ಕೂ ಅದ್ಭುತ ಅನುಭವ ನೀಡುತ್ತದೆ. ಅದಕ್ಕೆ  ತಕ್ಕಂತೆ ಭುವನ್ ಗೌಡ ಅವರ ಕ್ಯಾಮೆರಾವರ್ಕ್ ಕೂಡ ಅದ್ಭುತವಾಗಿದೆ,
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed